ಮಲೆನಾಡ ಮೂಲೆಯಲಿ ಸೆರಗು ಹೊದ್ದುಕೊಂಡು ಸದ್ದಿಲ್ಲದೇ ಕನಸು ಕಾಣುವ, ಬೆಳಕು ತೋರುವ, ಬಯಕೆ ಹುಟ್ಟಿಸುವ ಜೀವಗಳು ಮಿಡಿಯುವ ಮುಂಡಗೋಡ ಒಂದು ದೊಡ್ಡ ಗ್ರಾಮವೆಂದರೂ ಸೈ. ಪಟ್ಟಣವೂ ಹೌದು. ಟಿಬೆಟಿಯನ್ ಕಾಲನಿಯ ದೆಸೆಯಿಂದ ಜಗತ್ತಿಗೆ ಚಿರಪರಿಚಿತ ಊರು. ಪಕ್ಕದಲ್ಲೇ ಪ್ರಸಿದ್ಧ ಅತ್ತಿವೇರಿ ಪಕ್ಷಿಧಾಮ. ರಮಣೀಯ ಸೊಬಗನ್ನು ಮಡಿಲಲ್ಲಿ ತುಂಬಿಕೊಂಡ ನಯನ ಮನೋಹರ ತಾಣ.
ಪಿ.ಎಚ್.ಡಿ ಸಂಶೋಧನೆಯಲ್ಲಿ ತಲ್ಲೀನನಾಗಲು ಬಿ.ಇಡಿ ಮತ್ತು ಪದವಿ ತರಗತಿಗಳಿಗೆ ಪಾಠ ಮಾಡಲು ಮನಸು ಒಲ್ಲೆ ಎನಿಸಿ ಕೆಲಸಕ್ಕೆ ವಿದಾಯ ಹೇಳಿ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಜ್ಞಾನಾರ್ಜನೆ ಮಾಡುತ್ತ ಸುಳಿದಾಡುತ್ತಿದ್ದೆ. ಒಂದಿನ ಹಿರಿಯ ಪ್ರಾಧ್ಯಾಪಕರೊಬ್ಬರು ನನ್ನನ್ನು ಬಳಿಗೆ ಕರೆದು ಹೀಗೆ ಕಿವಿ ಮಾತು ಹೇಳಿದ್ದರು. '' ಏನ್ರಿ ಬಂಗಾರಿ ಇಷ್ಟೊಂದ ಓದಿ, ಅನುಭವ ಪಡೆದು ಬರೀ ಸಂಶೋಧನೆ ಮಾಡ್ಕೋತ ಟೈಂ ಕಳದ್ರ ಚಲೋ ಅನುಸುದಿಲ್ಲ ಬಿಡ್ರಿ. ನಿಮ್ಮ ಜ್ಞಾನ ಜಗತ್ತಿಗೆ ಸಿಗಬೇಕು. ಪಾಠಾ ಮಾಡುದನ್ನ ಮಾತ್ರ ನಿಲ್ಲಿಸಬ್ಯಾಡ್ರಿ''. ಈ ಮಾತು ಕೇಳಿ ನನ್ನ ಮೈ ಜುಂ ಎಂದಿತು. ಹೌದಲ್ಲ! ನಾನು ಸಂಶೋಧನೆ ಮಾಡ್ತಾನೆ ಪಾಠಾನೂ ಮಾಡಬಹುದಲಾ ಅನಸ್ತು. ನಾನೀಗಾಗಲೇ ಹೈಸ್ಕೂಲು ಶಾಲಾ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿ ಕೊಡಗಿನ 'ಕರಿಕೆ' ಗ್ರಾಮದ ಹೈಸ್ಕೂಲಿಗೆ ಇಂಗ್ಲೀಷ ಭಾಷಾ ಶಿಕ್ಷಕನಾಗಿ ನೇಮಕಗೊಂಡಿದ್ದೇನೆ. ಆದರೆ, ಸಂಶೋಧನೆಯ ಕಾರಣ ಕೆಲಸಕ್ಕೆ ಇನ್ನೂ ಹಾಜರಾಗಿರಲಿಲ್ಲ.ಇಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಂಗ್ಲೀಷ ಭಾಷಾ ಶಿಕ್ಷಕರ ಕೊರತೆ ಇದ್ದುದನ್ನು ಗಮನಿಸಿದೆ. ಮೊದಲಿನಿಂದಲೂ ಶಿರಸಿ, ಬನವಾಸಿ, ಗೋಕರ್ಣ, ಮುರ್ಡೇಶ್ವರ ಈ ಪ್ರದೇಶಗಳು ನನ್ನ ನೆಚ್ಚಿನ ತಾಣಗಳಾಗಿದ್ದರಿಂದ ಅತಿಥಿ ಉಪನ್ಯಾಸಕ ವೃತ್ತಿಯನ್ನು ಮುಂಡಗೋಡಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆಪ್ಟಂಬರ್ 17, 2007 ರಿಂದ ಪ್ರಾರಂಭಿಸಿದೆ. ಇನ್ನೇನು ಎಪ್ರಿಲ್ 30, 2008 ಕ್ಕೆ ವಿದಾಯ ಹೇಳುತ್ತಿದ್ದೇನೆ.
ಇಂಗ್ಲೀಷ ಭಾಷೆಯ ಜೊತೆ ಜೊತೆಗೇನೆ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿಯನ್ನ ಹೆಚ್ಚಿಸಲು ನನ್ನ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದೆ. ಕಾಲೇಜಿನಲ್ಲಿರುವ ಕೆಲವು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಾಹಿತ್ಯಾಸಕ್ತಿಯನ್ನ ಗಮನಿಸಿ, ಪ್ರೋತ್ಸಾಹಿಸಿ ಪ್ರಾಚಾರ್ಯರ ಅನುಮತಿ ಪಡೆದು '' ಶಿಕ್ಷಣ ಮಾನಸ'' ಕೈ ಬರೆಹದ ಗೋಡೆ ಪತ್ರಿಕೆಯನ್ನು 21 ಮಾರ್ಚ್ 2008 ರಂದು ಹೊರ ತಂದಿದ್ದೂ ಆಯಿತು. ಅದು ಕಾಲೇಜಿನ ಬಹುತೇಕ ಎಲ್ಲ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಗಮನ ಸೆಳೆದದ್ದೂ ಆಯಿತು.
ಈ ಕಾರ್ಯ ಕೈಗೊಳ್ಳಲು ವಿದ್ಯಾರ್ಥಿ ವೃಂದ ಹಾಗೂ ಪ್ರಾಚಾರ್ಯರಾದ ಡಾ.ಎ.ಎಸ್.ಕಬ್ಬೂರ ಅವರ ಸಹಕಾರ ಅವಿಸ್ಮರಣೀಯ. ಜೊತೆಗೆ ಉಪನ್ಯಾಸಕರಾದ ಶ್ರೀಮತಿ ವಿದ್ಯಾ ನಾಯಕ, ಬಿ.ಎಚ್.ಮೋರೆ, ಎಸ್.ಎನ್.ಮೇಟಿ, ಆರ್.ಎಲ್.ತೆಂಬದ, ಜೆ.ಎಸ್.ಹೆಗಡೆ, ಶ್ರೀ ಹಡಪದ, ವಿಜಯ ಕಾಂಬಳೆ, ಹನಮಂತ ಸಂಜೀವಣ್ಣವರ ಅವರಲ್ಲದೇ ಕಾಲೇಜಿನ ಇತರೆ ಸಿಬ್ಬಂಧಿ ವರ್ಗ ತುಂಬು ಹೃದಯದ ಸಹಕಾರ ನೀಡಿದ್ದನ್ನು ಎಂದಿಗೂ ಮರೆಯಲಾರೆ. ಜಗದೀಶ, ಸಿದ್ದಾರ್ಥ ಮುಂತಾದವರ ಸಹೃದಯತೆಯನ್ನೂ ನೆನೆಯದೇ ಇರಲಾರೆ.
ಮನದ ಮೂಲೆಯಲ್ಲಿ ಮನೆ ಮಾಡಿ ಮೊಳಕೆ ಒಡೆಯುವ ಮರಿ ಮುತ್ತುಗಳಿಗೆ ತುತ್ತು ನೀಡುವ ಕೆಲಸಕ್ಕೆ ಪ್ರೇರಣೆ ನೀಡಿದ್ದೇನಷ್ಟೆ.ಇದರಲ್ಲಿ ನನ್ನ ಸಾಧನೆ ಏನೂ ಇಲ್ಲ.
ವಿದ್ಯಾರ್ಥಿಗಳನೇಕರು ತಮಗೆ ತೋಚಿದ್ದನ್ನು ಗೀಚಿ ಸಹಕರಿಸಿದ್ದಾರೆ. ಇದೀಗ ಅವರ ಬರೆಹಗಳು ಬ್ಲಾಗ್ ನಲ್ಲೂ ಬಾಯಿ ಬಿಟ್ಟಿರುವುದು ಅಚ್ಚರಿ ಹಾಗೂ ಸಂತೋಷದ ಸಂಗತಿ. ಇನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೃಂದವು ಕಥೆ, ಲೇಖನ, ಚುಟುಕು, ನಗೆ ಹನಿ, ಸುಭಾಷಿತ, ತಮ್ಮ ಅನುಭವ ,ಮತ್ತಿತರೆ ವಿಚಾರಗಳನ್ನು ಮುಕ್ತವಾಗಿ ಬರೆದು ಕೈ ಬರೆಹ ಪತ್ರಿಕೆಗೆ ಮತ್ತು ಈ ಬ್ಲಾಗ್ ಸೈಟಿಗೆ ಕೊಟ್ಟು ಸಹಕರಿಸುವರೆಂಬ ವಿಶ್ವಾಸ ನನಗಿದೆ.
ಒಂದರ್ಥದಲ್ಲಿ ಪತ್ರಿಕೆ ಬೇಗ ಕಣ್ತೆರೆಯುವುದಕ್ಕೆ ಕಾರಣರಾದ ಕು.ಶಿಲ್ಪಾ, ಕು.ಅಶ್ವಿನಿ, ಅಜ್ಜಯ್ಯ, ಮಲ್ಲೇಶಿ, ಪ್ರಾಚಾರ್ಯರು ನನ್ನ ಸಹೋದ್ಯೋಗಿಗಳಿಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು. ಬ್ಲಾಗ್ ಸೈಟಿನಲ್ಲಿ ಭರ್ರನೇ ರೂಪು ಪಡೆದು ನಿಮ್ಮೆದುರು ತನ್ನ ರೂಪ ತೋರಿಸಲು ತಮ್ಮ ಒತ್ತಡದ ಕೆಲಸಗಳ ಮಧ್ಯೆಯೂ ನನಗಾಗಿ ಸಮಯ ಸರಿಸಿ, ಅಕ್ಷರ ಪೇರಿಸಿದ ಸನ್ಮಿತ್ರ ಸುಭಾಸ ಮಂಗಳೂರ ಅವರಿಗೂ ನನ್ನ ಹಾಗೂ ತಮ್ಮೆಲ್ಲರ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಏನೇನೋ ಕೆಲಸಗಳ ಮಧ್ಯೆ ಇಂಥದ್ದೊಂದು ಚಟುವಟಿಕೆ ನಡೆಸಲು ಪ್ರೇರಣೆ ನೀಡಿದ ಆ ಶಕ್ತಿಗೆ ಭಕ್ತಿ ಪೂರ್ವಕ ನಮನಗಳು. ಮತ್ತೆ ಕೆಲವೇ ದಿನಗಳಲ್ಲಿ ಹೊಸ ವಿಚಾರಗಳೊಂದಿಗೆ ನಿಮ್ಮ ಮನದ ಅಂಗಳಕ್ಕೆ ಬರಲು ದಿನಗಳನ್ನು ಎದುರು ನೋಡುತ್ತಿದ್ದೇನೆ. ಅಂಗಳದಲ್ಲಿ ರಂಗೋಲಿ, ಪ್ರೀತಿ, ವಿಶ್ವಾಸ, ಸಹೃದಯತೆ ತುಂಬಿ ಕೊಂಡಿರುತ್ತೀರಿ ಅಲ್ಲವೇ?
***********
ಸಂಪಾದಕ :
ಬಸವರಾಜು ಯ. ಬಂಗಾರಿ
ಧಾರವಾಡ







